ನಿನಾದ

ಜನ ಮನಕೆ ಸಾಹಿತ್ಯದ ಹೂರಣ

ನೆನಪಿನಂಗಳದಲ್ಲಿ… ಅಕ್ಟೋಬರ್ 7, 2010

ಅರಳುವ ಹೂವುಗಳ ಜೊತೆಯಲ್ಲಿ
ಅರಳುತಿರುವ ನನ್ನ ಸುಂದರ ಮನಸು
ಅಂತರಾಳದಲಿ ಹುದುಗಿರುವ
ನೆನಪುಗಳನು ಕೆದಕಿದೆ.

ಅದೆಂದೋ ಆದ ಘಟನೆ
ಕಣ್ಣಂಚಿನಲಿ ನರ್ತಿಸುತ್ತಿದೆ
ಮೂರಗಲ ಮನಸಿನಲಿ
ಊರಗಲ ಕನಸುಗಳ ಹಾಸಿ.

ಅಭಯ ನೀಡಿದವರ ನೆನಪು
ಧೈರ್ಯ ತುಂಬಿದವರ ನೆನಪು
ಸುಮಧುರ ಬಾಂಧವ್ಯ ಬೆಸೆದ
ಸಹೋದರಿಯ ನೆನಪು…
ನಿಟ್ಟುಸಿರಿನಲಿ ಪಟಬಿಚ್ಚಿ ತೇಲುತ್ತಿದೆ.

ಶಾಲೆ, ಕಾಲೇಜಿನಲಿ ಕಳೆದ ಕ್ಷಣಗಳ
ಸವಿನೆನಪು, ಬಾನಂಗಳದಲಿ
ಚಿತ್ತಾರ ಮೂಡಿದಂತೆ ಚಿಗುರೊಡೆದಿದೆ
ಅಕ್ಕರೆಯ ಅಪ್ಪುಗೆಯನು ನೀಡಿ.

ಶಾಂತವಾಗುತ್ತಿದೆ ಮನಸು..ನೆನಪೆಂಬ
ಸಂಕೋಲೆಗಳ ಕೊಂಡಿಗಳನು ಕಳಚುತ್ತಾ,
ಸುಮ್ಮನೆ ಕುಳಿತಿದ್ದೇನೆ ನಾನು
ಏನೂ ಮಾಡಲಾಗದಂತೆ…
ಹಳೆಯ ನೆನಪುಗಳ ಜೊತೆ ಹರಟುತ್ತಾ.

 

 

ಹೊಸ ನಾಳೆಗೆ… ಮಾರ್ಚ್ 2, 2010

ಹೊಸ ನಾಳೆಗೆ...

ದೀಪದ ಬುಡದಲ್ಲೇ
ಕತ್ತಲೆಯಿದೆ-ಕತ್ತಲೆಯ
ಬಸಿರೊಳಗೆ ಬೆಳಕಿದೆ
ಆ ಬೆಳಕು ಹರಡುವುದು
ಹೊಸ ನಾಳೆಗೆ…

ನೀನಿತ್ತ ಮುತ್ತುಗಳ
ರಂಗೋಲಿ ಇಟ್ಟಿರುವೆ
ಭಾವಗಳ ರಂಗನ್ನು
ಅದರೊಳಗೆ ತುಂಬಿರುವೆ
ಹೊಸ ನಾಳೆಗೆ…

ನಾಳೆಯ ಹೂಗಳಿಗೆ ನೀ
ಗಂಧವಾಗಲೆಂದು ಕನಸುಗಳ
ನನ್ನೊಳಗೆ ಭಂಧಿಸಿರುವೆ
ಆ ಸ್ವಾರ್ಥ ಕನಸುಗಳಿಗೆ
ರಾತ್ರಿಯೆಲ್ಲಾ ಹಗಲಾಗಿಸಿ
ಬಣ್ಣ ತುಂಬಿದೆ

ಬರುವ ಹೊಸನಾಳೆಗೆ
ಬೆಳಕೇ ಅರಳಿ ನಿಂತ ಪರಿಗೆ
ಕತ್ತಲು ಬೆಳಕಾದ ಘಳಿಗೆ
ಹೊರಟು ನಿಂತಿದೆ ನೆರಳ ಮೆರವಣಿಗೆ
ನನ್ನೆಲ್ಲ ನೋವು-ನಲಿವುಗಳ, ಜೀವ-ಸಾವುಗಳ
ಭಾವ-ಬದುಕುಗಳ ನಾವೆಯಲಿ
ಕಾಯುತ್ತಿರುವೆ ಹೊಸ ನಾಳೆಗೆ.