ನಿನಾದ

ಜನ ಮನಕೆ ಸಾಹಿತ್ಯದ ಹೂರಣ

ಮತ್ತೆ ಅರಳುವ ಮುನ್ನ ಸೆಪ್ಟೆಂಬರ್ 16, 2010

ಬೆಳಕು ಹರಿಯೆ ಗಿಡದಮೇಲರಳಿದ ಹೂವು

ಬೇಟೆಯ ಜಾಡು ಹಿಡಿದು ಬಂದ ಜೇನು ಹುಳ

ಜೇನ ಸಂಗ್ರಹಿಸಿ ಹೊರಟು ಹೋಯಿತು.

ಅದೇ ಹೂವ ಮೇಲಿಟ್ಟು ಚಿತ್ತ ಬಂತು ದುಂಬಿ

ಈಗಷ್ಟೇ ನೋಡುತ್ತಿತ್ತು ಅತ್ತಿತ್ತ ಪರಾಗ ಸ್ಪರ್ಶಿಸಿ

ಹಾರಿತು ತನ್ನ ಪಾಡಿಗೆ ತಾನು.

ಜನಿಸಿದ ದಿನವೇ ಮುದುಡಿ

ಕಾಲದೊಳು ಲೀನವಾಗಿ ಬಾಡಿತು ಹೂವು

ಗಿಡ ಹಿಡಿತ ಸಡಿಲಿಸಿತು, ಹೂ ಧರೆಗುರುಳಿತು.

ರಾತ್ರಿಯಲಿ ಚಂದ್ರನ ಜೊತೆ ಜೊತೆಯಲ್ಲಿ

ನಕ್ಷತ್ರಗಳೂ ಲಗ್ಗೆ ಇಟ್ಟವು ನೀಲ ಗಗನಕ್ಕೆ

ಕರಿನೆರಳ ಛಾಯೆಯ ಮರೆಮಾಚಲು.

ಇರುಳ ಬಸಿರೊಳಡಗಿರುವ ಸೂರ್ಯ

ಇಣುಕಿ ನೋಡುವನು, ಕಿರಣ ಚೆಲ್ಲುವನು

ಚಂದ್ರ ನಕ್ಷತ್ರಗಳ ಮುಚ್ಚಿ ಹಾಕಿ.

ಮೆಲ್ಲಗೆ ಉಸಿರೆಳೆದು ಖಾಲಿ

ಆಕಾಶದ ಸೂರಿನಲಿ ಅವನಗಲು

ಮತ್ತೊಂದು ಹೂ ಗಿಡದಲರಳುವುದು.

Advertisements