ನಿನಾದ

ಜನ ಮನಕೆ ಸಾಹಿತ್ಯದ ಹೂರಣ

ಮಡಿದ ಕವನ, ನಿಂತ ಸಿಂಹ ಘರ್ಜನ. ಡಿಸೆಂಬರ್ 30, 2009

> ರೆ.ರೆ..ರೆ…ರೆ….ರಾ…..
> ಈ ಕೈ ಕರ್ನಾಟಕದ್ದು, ಈ ಐದು ಬೆರಳುಗಳಲ್ಲಿ ಐದು ಕೋಟಿ ಕನ್ನಡಿಗರ ಶಕ್ತಿ ಇದೆ.

ಈ ಎರಡು ಸಾಲುಗಳಲ್ಲಿ ಎರಡು ಎದೆಗಳ ದನಿಯಿದೆ. ಜೀವನದ ಗಾಂಭೀರ್ಯತೆಯಿದೆ. ಅನುಭವದ ಅಗಾಧತೆಯಿದೆ. ತಮ್ಮ ತಮ್ಮ ಕ್ಷೇತ್ರದ ಮೇಲೆ ಅಕ್ಕರೆಯಿದೆ. ಭಾವಗಳ ಮೊರೆತ ಮೆರೆತಗಳಿವೆ. ಆದರೆ ಇಂದು ಈ ಎರಡು ಸಾಲುಗಳನುಚ್ಚರಿಸಿದ ಕಂಠಗಳು ದನಿಯಲ್ಲಿ ಲೀನವಾಗಿವೆ.  ನಿನ್ನೆ ಕನ್ನಡಿಗರಿಗೆ ಸಿ.ಅಶ್ವಥ್ ಅವರ ನಿಧನದ ಶಾಕಿಂಗ್ ಸುದ್ದಿ. ಮರೆಯುವ ಮುನ್ನವೇ ಡಾ||ವಿಷ್ಣುವರ್ಧನ್ ಅವರ ನಿಧನ.  ನಿನ್ನೆ ಸರಿ ಸುಮಾರು ಮಧ್ಯಾಹ್ನ ಹನ್ನೆರಡು ಗಂಟೆಗೆ ಸುಗಮ ಸಂಗೀತ, ಜನಪದ ಪ್ರಾಕಾರಗಳಲ್ಲಿ ತಮ್ಮನ್ನು ತಾವೇ ತೊಡಗಿಸಿಕೊಂಡ ಪ್ರಸಿದ್ಧ ಸಂಗೀತ ನಿರ್ದೇಶಕ, ಸಿ. ಅಶ್ವಥ್ ತೀರಿಕೊಂಡರು. ಕಿಡ್ನಿ ವೈಫಲ್ಯ ಅವರ ಸಾವಿಗೆ ಕಾರಣವಾಯಿತು. ಅದಾದ ದಿನದ ಒಳಗೆ ಕನ್ನಡ ಚಿತ್ರರಂಗದ ಪ್ರಮುಖ ನಟ ಡಾ|| ವಿಷ್ಣುವರ್ಧನ್ ಹೃದಯ ವೈಫಲ್ಯದಿಂದ ಬಳಲಿ ಆಸ್ಪತ್ರೆಗೆ ಸೇರುವ ಮುನ್ನವೇ ತೀರಿಕೊಂಡರೆಂದು ಈ ಬೆಳಿಗ್ಗೆ ಸುದ್ದಿ ಬಂತು. ಕೇವಲ ೨೪ ಗಂಟೆಗಳ ಕಾಲದಲ್ಲಿ ಕರ್ನಾಟಕದ ಎರಡು ರತ್ನಗಳು ಆಗಸದಂಚಿನ ನಕ್ಷತ್ರಗಳಾಗಿವೆ. ಇವೆಲ್ಲದರ ನಡುವೆ ನನ್ನ ಪ್ರಶ್ನೆ- ಕಾಣದಾ ಕಡಲಿಗೆ ಹಂಬಲಿಸಿತೇ.. ಮನಾ…? ಶೂನ್ಯವೇ ಜೀವನಾ?

2009 ಹೋಗುತ್ತಾ ಹೋಗುತ್ತಾ , ಸಂಗೀತ ಹಾಗು ಚಿತ್ರ ಪ್ರೇಮಿಗಳಲ್ಲಿ ಒಂದು ಕಣ್ಣೀರ ಬಿಂದುವನ್ನುಳಿಸಿ ಹೋಗುತ್ತಿದೆ. ಇಹದ ನಾಟಕಕ್ಕೆ ತೆರೆ ಎಳೆದು, ಇಬ್ಬರು ಅದ್ಭುತ ಕಲಾವಿದರನ್ನು ವಿಧಿ ತನ್ನೆಡೆಗೆ ಸೆಳೆದೊಯ್ಯಿತು. ಸಿ. ಅಶ್ವಥ್ ಹಾಗು ವಿಷ್ಣುವರ್ಧನ್ ಕನ್ನಡದ ಹೃದಯಗಳಲ್ಲಿ ಮೂಡಿಸಿದ ಛಾಪು ಅಜರಾಮರ. ತಾರಕ ಗಾಯನದ ಗಾರುಡಿಗ ಮತ್ತು ಅಪೂರ್ವ ಸಂಯೋಜಕ ಅಶ್ವಥ್ ಅವರ ಮಾಯೆಗೆ ಎಂಥವರನ್ನಾದರೂ ಕರಗಿಸುವ ತಾಕತಿತ್ತು . ಭಾವಗೀತೆ ಮತ್ತು ಸುಗಮ ಸಂಗೀತದ ಬೆಳವಣಿಗೆಯಲ್ಲಿ ಅವರ ಪಾಲೇ ಹೆಚ್ಚು ಅಂದರೆ ಸುಳ್ಳಲ್ಲ . ಭಾವುಕ ಮನಸ್ಸುಗಳು ಅಶ್ವಥ್ ಕಂಠವನ್ನು miss ಮಾಡಿಕೊಳ್ಳುವುದಂತೂ ನಿಶ್ಚಿತ . ಇನ್ನು ಕನ್ನಡದ “ಸಿಂಹ” , ಡಾ. ವಿಷ್ಣುವರ್ಧನ್ ಇಷ್ಟು ಬೇಗ ಯಾತ್ರೆ ಮುಗಿಸುತ್ತಾರೆಂದು ಯಾರೂ ಎಣಿಸಿರಲಿಕ್ಕಿಲ್ಲ . ಪುಟ್ಟಣ್ಣನವರ ಶೋಧದ ಈ ಪ್ರತಿಭೆ ,ಕನ್ನಡ ಚಿತ್ರರಂಗದ ಇತಿಹಾಸದಲ್ಲಿ ಬೆಳಗಿದ ರೀತಿ ಅದ್ಭುತ . ಇನ್ನು ಮುಂದೆ ಅವರ ನೂರೊಂದು ನೆನಪುಗಳು ಮಾತ್ರ ಎಲ್ಲರ ಎದೆಯಾಳದಲ್ಲಿ ಚಿರಸ್ಥಾಯಿ …….

ಕಾಣದಾ ಕಡಲಿಗೆ ಹಂಬಲಿಸಿತೇ.. ಮನಾ…? ಶೂನ್ಯವೇ ಜೀವನಾ?….ಕಾಣದಾ ಕಡಲಿಗೆ ಹಂಬಲಿಸಿತೇ.. ಮನಾ…? ಶೂನ್ಯವೇ ಜೀವನಾ?….

Advertisements