ನಿನಾದ

ಜನ ಮನಕೆ ಸಾಹಿತ್ಯದ ಹೂರಣ

ಬುದ್ದಿ ಇಲ್ಲದ “ಬುದ್ದಿ ಜೀವಿ”! ಡಿಸೆಂಬರ್ 10, 2009

ಈ ಮಾನವನನ್ನು ಏಕೆ ಬುದ್ದಿ ಜೀವಿ ಅಂತಾರೋ ನನಗಂತೂ ಗೊತ್ತಿಲ್ಲ! 2009ರಿಂದ 2012ರವರೆಗಿನ ಅವಧಿಯಲ್ಲಿ ಪ್ರಳಯಾಂತಕಾರಿ ಘಟನೆಗಳು ನಡೆದು 2012ರ ಡಿಸೆಂಬರ್ ವೇಳೆಗೆ ಜಗತ್ತು ಸರ್ವನಾಶ ಹೊಂದುವುದಾಗಿ ‘ಕಾಲಜ್ಞಾನಿ’ ನಾಸ್ಟ್ರಡಾಮಸ್ ಹೇಳಿರುವುದಾಗಿ ಪತ್ರಿಕೆಗಳಲ್ಲಿ ವರದಿಯಾಗಿದೆ. ಪ್ರಳಯಾಂತಕಾರಿ ಘಟನೆಗಳು ಸಂಭವಿಸಿಯಾವು. ಪರಿಸರ ನಾಶ, ಜಾಗತಿಕ ತಾಪಮಾನದ ಹೆಚ್ಚಳ, ಹೊಸ ಹೊಸ ರೋಗಗಳು, ದೇಶಗಳ ಅಣ್ವಸ್ತ್ರ ದಾಹ, ಯುದ್ಧ ದಾಹ ಇವುಗಳನ್ನೆಲ್ಲ ಗಮನಿಸಿದರೆ ಸನಿಹದಲ್ಲೇ ಭಾರೀ ಕೇಡುಗಾಲ ಉಂಟೆಂಬ ಅನುಮಾನ ಬರದಿರದು. ಆದರೆ, ಜಗತ್ತೇ ಸರ್ವನಾಶವಾಗುತ್ತದೆಂಬ ನುಡಿ ಮಾತ್ರ ಉತ್ಪ್ರೇಕ್ಷೆಯೇ ಸರಿ.  ಇಷ್ಟೆಲ್ಲಾ ತಿಳಿದೂ ಮಾನವ ಮಾಡಲು ಹೊರಟಿರುವುದೇನು?!  ತಿಳಿದೂ ತಿಳಿದೂ ತಪ್ಪೇ ಮಾಡುವುದು!

ಬೆಳದಿಂಗಳು ಸೂಸುವ ಚಂದ್ರನ ಮೇಲೆ ನೀರಿನ ಅಂಶ ಇರುವ ಸಂಗತಿಯನ್ನು ಭಾರತದ ಚಂದ್ರಯಾನ-1 ಸ್ಫೋಟಿಸಿರುವ ಬೆನ್ನಲ್ಲೇ ಚಂದ್ರನ ಗರ್ಭದಲ್ಲಿ ಹುದುಗಿರುವ ನೀರನ್ನು ಬಗೆಯಲು ನ್ಯಾಷನಲ್ ಏರೋನಾಟಿಕ್ಸ್ ಮತ್ತು ಸ್ಪೇಸ್ ಅಡ್ಮಿನಿಸ್ಟ್ರೇಷನ್ (ನಾಸಾ) ವಿಜ್ಞಾನಿಗಳು ಚಂದ್ರನ ಮೇಲೆ ಬಾಂಬ್ ಸಿಡಿಸಲಿದ್ದಾರೆ. ಅಕ್ಟೋಬರ್ 9ರಂದು ನಾಸಾ LCROSS ಕೃತಕ ಉಪಗ್ರಹವನ್ನು ಉಡಾಯಿಸಲಿದೆ. ಈ ಉಪಗ್ರಹ ಸಿಡಿಸುವ ಸೆಂಟಾರ್ ರಾಕೆಟ್, ಬುಲೆಟ್ ವೇಗಕ್ಕಿಂತ ದ್ವಿಗುಣ ವೇಗದಲ್ಲಿ ಸಾಗಿ ಚಂದ್ರನ ಮೇಲೆ ದೊಡ್ಡ ರಂಧ್ರವನ್ನು ಸೃಷ್ಟಿಸಲಿದೆ. ಚಂದ್ರನ ಗರ್ಭದಲ್ಲಿ ಹುದುಗಿದೆ ಎನ್ನಲಾದ ಐಸ್ ರೂಪದಲ್ಲಿರುವ ನೀರಿರುವ ಪ್ರದೇಶದಲ್ಲಿ ರಾಕೆಟ್ಟನ್ನು ಸಿಡಿಸಲಾಗುತ್ತಿದೆ.ರಾಕೆಟ್ ಸಿಡಿತದಿಂದಾಗಿ ಚಂದ್ರನ ಮೇಲ್ಮೈಯಿಂದ ಏಳುವ ಧೂಳನ್ನು ದೂರದರ್ಶಕದ ಸಹಾಯದಿಂದ ಭೂಮಿಯ ಮೇಲಿಂದಲೇ ನೋಡಬಹುದು ಎನ್ನಲಾಗಿದೆ. NASA-TV ಉಪಗ್ರಹದ ಉಡಾವಣೆ ಮತ್ತು ರಾಕೆಟ್ ಸ್ಫೋಟದ ಚಿತ್ರಣವನ್ನು ಬಿತ್ತರಿಸಲಿದೆ.

ಚಂದ್ರನಲ್ಲಿ ಮೊದಲು ನೀರು ಪತ್ತೆ ಮಾಡಿದ್ದು ಯಾರು? ᅠಚಂದ್ರಯಾನ-೧ ಉಪಗ್ರಹದಲ್ಲಿದ್ದ ನಾಸಾ ನಿರ್ಮಿತ “ಎಂ-೩’ ಅಥವಾ ಎಂ- ಕ್ಯೂಬ್‌’ (ಮೂನ್‌ ಮಿನರಾಲಜಿ ಮ್ಯಾಪರ್‌) ಉಪಕರಣ ಎಂಬುದೇ ಸಾಮಾನ್ಯ ತಿಳಿವಳಿಕೆ. ವಾಸ್ತವವಾಗಿ ನೀರಿನಂಶ ನಾಸಾ ಉಪಕರಣಕ್ಕಿಂತ ೩ ತಿಂಗಳು ಮೊದಲೇ ಪತ್ತೆ ಮಾಡಿ ಮಾಡಿದ್ದು ಇಸ್ರೋದ ಎಂಐಪಿ! ಎಂಐಪಿ ಅಂದರೆ ಚಂದ್ರನ ಮೇಲೆ ಅಪ್ಪಳಿಸಿದ್ದ ಸಾಧನ. ಮಾಜಿ ರಾಷ್ಟ್ರಪತಿ ಕಲಾಂ ಒತ್ತಾಯದಿಂದಾಗಿ ಚಂದ್ರಯಾನ-೧ರಲ್ಲಿ ಸೇರಿದ ಎಂಐಪಿ ಭಾರತೀಯ ತಿರಂಗಾವನ್ನು ಚಂದ್ರನ ಅಂಗಳದಲ್ಲಿ ಇಳಿಸಿತ್ತು. ಇವೆಲ್ಲದರಿಂದ ಉಪಯೋಗ ಇದ್ದರೂ ಹಾನಿಯೇ ಜಾಸ್ತಿ ಅಂತ ಅನಿಸ್ತ ಇಲ್ವಾ?

ಈಗ ವಿಚಾರಕ್ಕೆ ಬರೋಣ….

ಜ್ಯೋತಿಷ್ಯದಲ್ಲಿ ಎಲ್ಲವನ್ನೂ ಮುಂಚಿತವಾಗಿ ಹೇಳಬಹುದು ಎಂಬ ಮಾತು ಶುದ್ಧ ಸುಳ್ಳು. ಸಾಮಾನ್ಯಜ್ಞಾನ ಮತ್ತು ತಕ್ಕಮಟ್ಟಿನ ವಿಜ್ಞಾನದರಿವು ನಮಗಿದ್ದರೆ ಜ್ಯೋತಿಷ-ಭವಿಷ್ಯನುಡಿಗಳು ನಮ್ಮನ್ನು ಅಧೀರರನ್ನಾಗಿಸವು. ಆದರೂ ಕೆಲವೊಮ್ಮೆ ವಿಚಾರವಾದಿಗಳ ಕಾರಣಿಕನುಡಿಗಳನ್ನೂ ನಂಬಬೇಕಾಗುತ್ತದೆ(ಪೂರ್ಣ ಅಲ್ಲದಿದ್ದರೂ). ಈಗ ನಾಸ್ಟ್ರಡಾಮಸ್‌ನ ಒಗಟಿನಂಥ ಹೇಳಿಕೆಗಳನ್ನು ನಾನಾ ವಿಧಗಳಲ್ಲಿ ಅರ್ಥೈಸಬಹುದು. ಅವನ ಭವಿಷ್ಯವಾಣಿಯ ಯಾವುದೇ ಒಂದು ನಿರ್ದಿಷ್ಟ ಹೇಳಿಕೆಯನ್ನು ಹಲವು ಘಟನೆಗಳ ಸಮರ್ಥನೆಗಾಗಿ ಬಳಸಲು ಸಾಧ್ಯ. ಆದರೆ ಇದ್ದಕಿದ್ದಂತೆ ಸರ್ವನಾಶವಾಗುವಷ್ಟು ಈ ಜಗತ್ತು ಕ್ಷುಲ್ಲಕವಲ್ಲ. ಸೃಷ್ಟಿ, ಬೆಳವಣಿಗೆ, ಮಾರ್ಪಾಡು, ನಾಶ ಎಲ್ಲವೂ ನಿಧಾನಪ್ರಕ್ರಿಯೆಗಳು. ‘ಶೀಘ್ರ ಸರ್ವನಾಶ’ದ ಭ್ರಮೆಗೆ ನಾವು ಬಲಿಯಾಗಬಾರದು. ಹಾಗೆ ನೋಡಿದರೆ, ಕಳೆದ ವರ್ಷ ವಿಜ್ಞಾನಿಗಳು ಉಂಟುಮಾಡಲೆತ್ನಿಸಿದ್ದ ‘ಭೂಗರ್ಭದೊಳಗಿನ ಮಹಾಸ್ಫೋಟ’ ಹೆಚ್ಚು ಅಪಾಯಕಾರಿಯಾಗುವ ಸಂಭವವಿತ್ತು. ಆದರೆ ತಾಂತ್ರಿಕ ಕಾರಣಗಳಿಂದ ಆ ಪ್ರಯೋಗಕ್ಕೀಗ ಹಿನ್ನಡೆಯಾಗಿದೆ. ಅಷ್ಟರಮಟ್ಟಿಗೆ ಭೂಮಿಯೀಗ ಸುರಕ್ಷಿತವಾಗಿದೆ!

ಮುಂದೇನು? ಇಲ್ಲಿದೆ ನೋಡಿ ಹೊಸ ಸುದ್ದಿ! ಭೂಮಿಗೆ ತೀವ್ರವಾಗಿ ಹಾನಿಯುಂಟು ಮಾಡುವ ಆಕಾಶಕಾಯ ಒಂದನ್ನು ಖಗೋಳ ವಿಜ್ಞಾನಿಗಳು ಕಂಡುಹಿಡಿದಿದ್ದಾರೆ. ಇದು 2048ರ ವೇಳೆಗೆ ಭೂಮಿಗೆ ಢಿಕ್ಕಿ ಹೊಡೆಯಬಹುದೆಂದು ನಾಸಾದ ವಿಜ್ಞಾನಿಗಳು ಊಹಿಸಿದ್ದಾರೆ. ಒಂದು ವೇಳೆ ಇದು ಭೂಮಿಗೆ ಢಿಕ್ಕಿ ಹೊಡೆದರೆ ಸುಮಾರು 6 ಸಾವಿರ ಚ.ಕೀ.ಮೀ ವಿಸ್ತೀರ್ಣದ ಜೀವಜಾಲವನ್ನು ನಿರ್ನಾಮ ಮಾಡಲಿದೆ. ಢಿಕ್ಕಿಯಿಂದ 2ಕಿ.ಮೀ ಆಳದ ಕಂದಕ ಸೃಷ್ಟಿಯಾಗಲಿದೆ ಎಂದು ವಿಜ್ಞಾನಿಗಳು ತಿಳಿಸಿದ್ದಾರೆ. ಆಕಾಶಕಾಯದ ವ್ಯಾಸ 130ಕಿ.ಮೀ ಇದ್ದು ಗಂಟೆಗೆ 70 ಕಿ.ಮೀ ವೇಗದಲ್ಲಿ ಇದು ಭೂಮಿಯ ಕಡೆ ಮುನ್ನುಗ್ಗುತ್ತಿದೆ. ಇದಕ್ಕೆ VK184-2007 ಎಂದು ನಾಮಕರಣ ಮಾಡಲಾಗಿದೆ. ಪ್ರಸ್ತುತ ಇದು ಭೂಮಿಯಿಂದ 9ಕೋಟಿ ಕಿ.ಮೀಗಳ ದೂರದಲ್ಲಿದೆ ಎಂದು ನಾಸಾ ವಿಜ್ಞಾನಿಗಳು ತಿಳಿಸಿದ್ದಾರೆ. ಈಗ ನನ್ನ ಕಾಡುತ್ತಿರುವ ಪ್ರಶ್ನೆ…. 2012ರ ಡಿಸೆಂಬರ್ ವೇಳೆಗೆ ಜಗತ್ತು ಸರ್ವನಾಶ ಹೊಂದುವುದೇ ಯಾ 2048 ರ ವೇಳೆಗೆ ಆಕಾಶಕಾಯ ಭೂಮಿಗೆ ಢಿಕ್ಕಿ ಹೊಡೆಯುವುದೇ?! ಉತ್ತರ ಗೊತ್ತಿದ್ದರೆ ದಯವಿಟ್ಟು ಮಿಂಚಂಚೆ ಕಳುಹಿಸಿ. (ಈ ಲೇಖನ ಮೊದಲು ಅಂಕುರದಲ್ಲಿ ಪ್ರಕಟಗೊಡಿತ್ತು.)

Advertisements